ವಿಷಯಕ್ಕೆ ಹೋಗು

ಗಂಟಲಮಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿಫ್ತೀರಿಯಾ ಉಬ್ಬಿದ ಕತ್ತನ್ನು ಉಂಟುಮಾಡಬಹುದು. ಕೆಲವೊಮ್ಮೆ ಇದನ್ನು 'ಗೂಳಿಯ ಕತ್ತು ಎಂದು ಕರೆಯಲಾಗುತ್ತದೆ.

ಗಂಟಲಮಾರಿಯು ಒಬ್ಬರಿಂದೊಬ್ಬರಿಗೆ ಭರದಿಂದ ಹರಡುವ ಸೋಂಕು ಜಾಡ್ಯಗಳಲ್ಲಿ ಒಂದು (ಡಿಫ್ತೀರಿಯ). ಗಳಚರ್ಮರೋಗ ಎಂದೂ ಕರೆವುದಿದೆ. ಮೂಗು, ಗಂಟಲು, ಗಳಗ್ರಂಥಿಗಳು (ಟಾನ್‍ಸಿಲ್ಸ್), ಹಾಗೂ ದುಗ್ಧ ಗ್ರಂಥಿಗಳುರೋಗದ ಮುಖ್ಯ ನೆಲೆಗಳು. ರೋಗಕ್ಕೆ ಕಾರಣ ಕೊರಿನಿಬ್ಯಾಕ್ಟೀರಿಯಂ ಡಿಫ್ತೀರಿಯೀ ಎಂಬ ಏಕಾಣು ಜೀವಿಗಳು.[] ದೇಹದ ಒಳಭಾಗವೊಂದರಲ್ಲಿಯ, ಮುಖ್ಯವಾಗಿ ಗಂಟಲಿನಲ್ಲಿಯ ಶ್ಲೇಷ್ಮಚರ್ಮ ಉದ್ದೀಪನಹೊಂದಿ ಅದರಿಂದ ಹೊರಟ ಸ್ರಾವ ಕೃತಕ ಚರ್ಮವಾಗಿ ಬೆಳೆವುದರೊಂದಿಗೆ ಬ್ಯಾಕ್ಟೀರಿಯ ಹೊರಜೀವವಿಷ (ಎಕ್ಸೊಟಾಕ್ಸಿನ್)[] ರಕ್ತದಲ್ಲಿ ವ್ಯಾಪಿಸಿ ರೋಗಲಕ್ಷಣಗಳನ್ನು ಹೊರಹೊಮ್ಮಿಸುವುದು ಈ ರೋಗದ ವೈಶಿಷ್ಟ್ಯ. ರೋಗ ಪಿಡುಗು ರೂಪದಲ್ಲಿ (ಎಪಿಡೆಮಿಕ್) ತಲೆ ಎತ್ತಬಹುದು ಅಥವಾ ಸ್ಥಳಜನ್ಯವಾಗಿ (ಎಂಡೆಮಿಕ್) ವರ್ಷದುದ್ದಕ್ಕೂ ಇರಬಹುದು. ಆಗಾಗ ಅಲ್ಲಲ್ಲೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಲೂಬಹುದು (ಸ್ಪೊರ್‍ಯಾಡಿಕ್).

ಪ್ರಪಂಚದ ಎಲ್ಲ ಭಾಗಗಳಲ್ಲೂ ಈ ರೋಗವಿದೆ. ಮುಂದುವರಿದ ದೇಶಗಳಲ್ಲಿ ಎಲ್ಲ ಶಿಶುಗಳಿಗೂ ರೋಗನಿರೋಧಕ ಚುಚ್ಚುಮದ್ದನ್ನು ಕೊಡುತ್ತಿದ್ದಾರಾಗಿ ರೋಗ ಸಾಕಷ್ಟು ಹತೋಟಿಗೆ ಬಂದಿದೆ. ಉದಾಹರಣೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ದೇಶಗಳಲ್ಲಿ 1941ರಲ್ಲಿ 55,000 ರೋಗಿಗಳು ಮತ್ತು 16 ಸಾವುಗಳು ವರದಿಯಾಗಿದ್ದವು. 1962ರಲ್ಲಿ ಕೇವಲ 16 ರೋಗಿಗಳು 2 ಸಾವುಗಳು ಮಾತ್ರ ವರದಿಯಾಗಿವೆ. ಭಾರತದಲ್ಲಿ ಈ ರೋಗದ ಸಮಸ್ಯೆ ಈಗಲೂ ಇದ್ದೇ ಇದೆ. ಆದರೆ ಕಡಿಮೆ ಇದೆ.

ರೋಗಕಾರಕ

[ಬದಲಾಯಿಸಿ]

ಪಿಯರ್ ಬ್ರಟಾನೊ ರೋಗಲಕ್ಷಣಗಳ ವಿವರಗಳನ್ನು ಹೊರಗೆಡವಿದ (1826). 57 ವರ್ಷಗಳ ಅನಂತರ ಇ. ಕ್ಲೆಬ್ಸ್ ಎಂಬ ವಿಜ್ಞಾನಿ ರೋಗಿಯ ಪೊರೆಯಿಂದ ಡಿಫ್ತೀರಿಯ ಬ್ಯಾಕ್ಟೀರಿಯಾಗಳನ್ನು ಪ್ರದರ್ಶಿಸಿದ.[] ಇವೇ ರೋಗಕ್ಕೆ ಕಾರಣವೆಂಬುದನ್ನು ಎಫ್. ಲಾಫ್ಲರ್ ಖಚಿಪಡಿಸಿದ. ಆದ್ದರಿಂದಲೇ ಇವನ್ನು ಈಗಲೂ ಕ್ಲೆಬ್ಸ್-ಲಾಫ್ಲರ್ ಬ್ಯಾಕ್ಟೀರಿಯಾಗಳೆಂದು ಕರೆಯುವುದು ರೂಢಿ, ವರ್ಗೀಕರಿಸುವಾಗ ಇವುಗಳಿಗೆ ಕೊರಿನಿಬ್ಯಾಕ್ಟೀರಿಯಂ ಡಿಫ್ತೀರಿಯೀ ಎಂದು ಹೆಸರಿಸಲಾಗಿದೆ. ಗ್ರ್ಯಾಂ ವರ್ಣಸಂಸ್ಕರಣಕ್ಕೆ ಈ ಬ್ಯಾಕ್ಟೀರಿಯಾಗಳು ವ್ಯಾಪಿತವಾಗಿವೆ. ಇವಕ್ಕೆ ತಾವಾಗಿ ತಾವೇ ಚಲಿಸುವ ಶಕ್ತಿ ಇಲ್ಲ. ದೇಹಾದ್ಯಂತ ತಾವೇ ನುಗ್ಗಿ ವೃದ್ಧಿಯಾಗಿ ಅಂಗಾಂಶಗಳೆಲ್ಲವನ್ನೂ ಇವು ಮುತ್ತಲಾರವು. ಇದ್ದಲ್ಲಿಯೇ ಇದ್ದು ತಮ್ಮ ದೇಹದ ಹೊರವಲಯದಿಂದ ಅತ್ಯಂತ ಶಕ್ತಿಯುತವಾದ ಹೊರಜೀವವಿಷವನ್ನು ಇವು ಉತ್ಪತ್ತಿ ಮಾಡುತ್ತವೆ. ಈ ವಿಷ ಪ್ರಭಾವದಿಂದಲೇ ರೋಗಲಕ್ಷಣಗಳು ಹೊಮ್ಮುತ್ತವೆ. ತೀವ್ರತೆಯ ದೃಷ್ಟಿಯಿಂದ ಇವುಗಳಲ್ಲಿ ದಾರುಣ, ಮಧ್ಯಸ್ತ, ಸಾಧು ಎಂದು ಮೂರು ಬಗೆ. ಈ ಮೂರು ರೋಗಕಾರಕಗಳೇ ವಿಷರಹಿತ ಏಕಾಣುಜೀವಿಗಳೂ ಇವೆ. ಇವುಗಳಿಂದ ರೋಗ ಪ್ರಾಪ್ತವಾಗುವುದಿಲ್ಲ. ರೋಗಕಾರಕಗಳು ಉಷ್ಣಾಂಶ ಹಾಗೂ ರಾಸಾಯನಿಕ ಪ್ರಭಾವಕ್ಕೊಳಗಾದರೆ ಸುಲಭವಾಗಿ ನಾಶ ಹೊಂದುತ್ತವೆ. ವಸ್ತುಗಳ ಮೇಲೆ ಹಾಗೂ ಧೂಳಿನಲ್ಲಿ ಇವು ಕೇವಲ ಸ್ವಲ್ಪಕಾಲ ಮಾತ್ರ ಉರ್ಜಿತವಾಗಬಲ್ಲವು.

ಮಾಂಸಭಟ್ಟಿ ಹಾಗೂ ಪೆಪ್ಟೋನ್ ಅಂಶ ಸೇರಿದ ಎಲ್ಲ ರೀತಿಯ ದ್ರವ ಮಾಧ್ಯಮಗಳಲ್ಲೂ ಈ ಜೀವಾಣುಗಳ ತಳಿ ಎಬ್ಬಿಸಬಹುದು.[] ಆದರೆ ಈ ದ್ರವ ಮಾಧ್ಯಮಗಳಲ್ಲಿ ಗ್ಲೂಕೋಸ್ ಮತ್ತು ಸಾಂದ್ರೀಕರಿಸಿದ ರಕ್ತದ್ರವವಿದ್ದಲ್ಲಿ (ಇನ್ಸ್‌ಪಿಸೇಟೆಡ್ ಸೀರಮ್) ಪುಷ್ಕಳವಾಗಿ ಬೆಳೆಯುತ್ತವೆ. ಈ ದ್ರವ ಮಾಧ್ಯಮವನ್ನು ಮೂಲತಃ ಕಂಡುಹಿಡಿದವನು ಲಾಫ್ಲರ್. ಸ್ಯಾಕರೋಸ್ ವಿನಾ ಗ್ಲುಕೋಸ್ ಮತ್ತು ಇತರ ಸಕ್ಕರೆಗಳಲ್ಲಿ ಈ ಜೀವಾಣುಗಳು ಹುದುಗೆಬ್ಬಿಸುತ್ತವೆ. ಆದರೆ ಯಾವ ಅನಿಲವೂ ಉತ್ಪತ್ತಿಯಾಗದು. ದಾರುಣಜಾತಿಗೆ ಸೇರಿದವು ಪಿಷ್ಠ ಮತ್ತು ಗ್ಲೈಕೋಜನ್ ಸಕ್ಕರೆಗಳಲ್ಲೂ ಹುದುಗೆಬ್ಬಿಸುತ್ತವೆ.

ಗಂಟಲಮಾರಿ ವಿಷ

[ಬದಲಾಯಿಸಿ]

ಇದು ಒಂದು ರೀತಿಯ ಹೊರಜೀವವಿಷವಷ್ಟೆ. ಏಕಾಣುಜೀವಿಗಳನ್ನು ಸೋಸಿದಾಗ ಸೋಸಿ ಹೊರಬಂದ ದ್ರವದಲ್ಲಿ ಈ ವಿಷವಿರುತ್ತದೆ. ಈ ದ್ರವವನ್ನು ಪ್ರಾಣಿಗಳ ದೇಹಕ್ಕೆ ಸೇರಿಸಿದರೆ ಅವು ರೋಗಗ್ರಸ್ತವಾಗಿ ಪ್ರಾಣ ಬಿಡುತ್ತವೆಂಬುದನ್ನು ಪಿ.ಪಿ. ಇರೂ ಪ್ರದರ್ಶಿಸಿದ. ಆಗಿನಿಂದಲೇ ಈ ವಿಷವನ್ನು ಸಂಸ್ಕರಿಸಿ ರೋಗನಿರೋಧಕ ರಕ್ಷೆಯಾಗಿ ಅಳವಡಿಸಿಕೊಳ್ಳಲು ಪ್ರಯತ್ನ ಸತತವಾಗಿ ನಡೆದು ಬಂತು.

ಸೋಂಕಿನ ಮೂಲ

[ಬದಲಾಯಿಸಿ]

ರೋಗಿ ಅಥವಾ ರೋಗವಾಹಕರು (ರೋಗಲಕ್ಷಣಗಳಲ್ಲೊಂದನ್ನೂ ಹೊರ ತೋರ್ಪಡಿಸಿಕೊಳ್ಳದೆ, ರೋಗಕಾರಕಗಳನ್ನು ಮಾತ್ರ ದೇಹದಲ್ಲಿ ಹೊತ್ತು ಇತರರಿಗೆ ಸೋಂಕು ಸಾಗಿಸುವ ವ್ಯಕ್ತಿಯೇ ರೋಗವಾಹಕ) ಸೋಂಕನ್ನು ಒಬ್ಬರಿಂದೊಬ್ಬರಿಗೆ ಹರಡುತ್ತಾರೆ. ಕೆಲವರಲ್ಲಿ ರೋಗದ ಸೋಂಕು ತಗಲಿದ್ದರೂ ಲಕ್ಷಣಗಳು ಹೊರಹೊಮ್ಮುವುದಿಲ್ಲ. ಹಾಗೂ ಲಕ್ಷಣಗಳೂ ಕಂಡುಬಂದರೂ ಉಂಟು. ಈ ಎರಡು ರೀತಿಯ ವ್ಯಕ್ತಿಗಳೂ ತಮಗೆ ಅರಿವಿಲ್ಲದೆ ಸೋಂಕನ್ನು ಇತರರಿಗೆ ಸಾಗಿಸುತ್ತಾರೆ.

ರೋಗವಾಹಕರಲ್ಲಿ ಸೋಂಕು ಸಾಗಿಸುವ ವ್ಯವಸ್ಥೆ ತಾತ್ಕಾಲಿಕವಾಗಿರಬಹುದು ಅಥವಾ ದೀರ್ಘಾವಧಿಯದಾಗಿರಬಹುದು. ತಾತ್ಕಾಲಿಕವಾಗಿ ಒಂದು ತಿಂಗಳು ಇದ್ದರೆ ದೀರ್ಘಾವಧಿಯಾಗಿ ಒಂದು ವರ್ಷವಿರಬಹುದು. ಸಾರ್ವಜನಿಕರಲ್ಲಿ. ದೀರ್ಘಾವಧಿವಾಹಕರ ಸಂಖ್ಯಾಪ್ರಮಾಣ ಶೇ 0.1 ರಿಂದ 5 ಎಂದು ಅಂದಾಜಾಗಿದೆ.

ಸೋಂಕು

[ಬದಲಾಯಿಸಿ]

ಗಂಟಲು, ಮೂಗಿನ ವಿಸರ್ಜನೆಯಲ್ಲಿರುವ ರೋಗಕಾರಕಗಳು ಬಟ್ಟೆಬರೆ, ಕರವಸ್ತ್ರ, ಟವಲು, ತಿನ್ನುವ ಹಾಗೂ ಕುಡಿಯುವ ಪಾತ್ರೆ ಪಗಡಿಗಳು, ಥರ್ಮೋಮೀಟರ್, ಆಟದ ಸಾಮಾನುಗಳು, ಪೆನ್ಸಿಲ್ ಇತ್ಯಾದಿ ಬಳಕೆಯ ವಸ್ತುಗಳನ್ನು ಸೇರುತ್ತವೆ. ಕ್ರಿಮಿ ಮಲಿನವಾದ ಈ ವಸ್ತುಗಳಿಂದ ಸೋಂಕು ಇತರರಿಗೆ ಹಾಯಬಹುದು.[]

ಸೋಂಕು ಹರಡುವ ಅವಧಿ

[ಬದಲಾಯಿಸಿ]

ರೋಗಲಕ್ಷಣಗಳು ಪ್ರಾರಂಭವಾದಂದಿನಿಂದ ಸಾಮಾನ್ಯವಾಗಿ 14ರಿಂದ 28 ದಿವಸಗಳ ವರೆಗೆ ರೋಗಿಯಿಂದ ಇತರರಿಗೆ ರೋಗ ಹರಡಲವಕಾಶವಿದೆ. ರೋಗದಿಂದ ಚೇತರಿಸಿಕೊಳ್ಳುತ್ತಿರುವವರ ಗಂಟಲು, ಮೂಗಿನ ವಿಸರ್ಜನೆಯನ್ನು ಪರೀಕ್ಷೆಗೊಳಪಡಿಸಬೇಕು. 24 ಗಂಟೆಗಳಲ್ಲಿ ಎರಡು ವೇಳೆ ಪರೀಕ್ಷಿಸಿ ಏಕಾಣುಜೀವಿಗಳ ಸುಳಿವಿಲ್ಲವೆಂದು ತಿಳಿದರೆ ರೋಗಿ ಸೋಂಕನ್ನು ಹರಡಲಾರನೆಂಬುದು ಇತ್ಯರ್ಥವಾದಂತೆ.

ಆಶ್ರಯ ಕೊಡುವ ವ್ಯಕ್ತಿ

[ಬದಲಾಯಿಸಿ]

ಗಂಟಲಮಾರಿ ಸಾಮಾನ್ಯವಾಗಿ ಮಕ್ಕಳನ್ನು ಕಾಡಿಸುವ ರೋಗ.[] ಶಾಲೆಗೆ ಇನ್ನೂ ಸೇರದಿರುವ ಮಕ್ಕಳಲ್ಲಿ ಈ ರೋಗದ ಪ್ರಮಾಣ ಅತ್ಯಧಿಕ. ನಿರೋಧ ಶಕ್ತಿ ಇಲ್ಲದಿದ್ದರೆ ಯಾವ ವಯಸ್ಸಿನಲ್ಲಾದರೂ ಇದು ಕಾಣಿಸಿಕೊಳ್ಳಬಹುದು. ಪಾಶ್ಚಾತ್ಯ ದೇಶಗಳಲ್ಲಿ ಜನಿಸಿದ ಶಿಶುಗಳಿಗೆಲ್ಲ ಸಾಮೂಹಿಕ ಚುಚ್ಚುಮದ್ದಿನ ಕಾರ್ಯಕ್ರಮದಿಂದ ನಿರೋಧರಕ್ಷೆ ಸಿಕ್ಕುತ್ತದಾಗಿ ಮನೆಗಿಂತ ಶಾಲೆಗಳಲ್ಲಿ ಇದರ ಸೋಂಕು ಹತ್ತುವುದು ಹೆಚ್ಚು. ಪ್ರೌಢರಿಗಿದು ಅಂಟಿದಾಗ ರೋಗಲಕ್ಷಣಾದಿಗಳಲ್ಲಿ ಸ್ತ್ರೀಪುರುಷರಲ್ಲಿ ಏನಾದರೂ ವ್ಯತ್ಯಾಸಗಳು ಕಂಡುಬರುತ್ತವೆಯೇ ಎಂಬುದನ್ನು ತಿಳಿಸಲು ಇರುವ ಆಧಾರಗಳು ಸಾಲದು.

ನಿರೋಧ ಶಕ್ತಿ

[ಬದಲಾಯಿಸಿ]

ತಾಯಿಯ ರಕ್ತದಲ್ಲಿ ಈ ರೋಗಕ್ಕೆ ರಕ್ಷಣೆ ಕೊಡುವ ಪ್ರತಿ ವಿಷವಸ್ತುಗಳಿದ್ದರೆ ಅವು ಗರ್ಭದಲ್ಲಿರುವ ಶಿಶುವಿಗೂ ಸಾಗಿ ಬರುತ್ತದಾಗಿ, ಜನಿಸಿದ ಶಿಶು ಮೊದಲು ಕೆಲವು ತಿಂಗಳಲ್ಲಿ ಈ ರೋಗದಿಂದ ನರಳುವುದಿಲ್ಲ. ಈ ರೀತಿ ದತ್ತವಾದ ನಿರೋಧ ಶಕ್ತಿ ಅದೃಶ್ಯವಾಗುವುದರೊಳಗಾಗಿ ಪ್ರತಿವಿಷಜನಕಗಳನ್ನು (ಆಂಟಿಜನ್) ಕೊಟ್ಟರೆ ಯಶ್ವಸ್ವಿ ರೋಗ ರಕ್ಷಣೆ ದೊರೆಯುತ್ತದೆಂದು ಹೇಳಲಾಗಿದೆ. ಈ ಪ್ರತಿವಿಷಜನಕವನ್ನು ನಾಯಿಕೆಮ್ಮಿನ ವಿರುದ್ಧ ಕೊಡುವ ರಕ್ಷೆಯೊಂದಿಗೆ ಸೇರಿಸಿಕೊಟ್ಟರೆ ಯಶಸ್ವಿ ನಿರೋಧ ಶಕ್ತಿ ಒದಗುತ್ತದೆನ್ನಲಾಗಿದೆ. ಡಿಫ್ತೀರಿಯ ನಿರೋಧ ಪ್ರತಿವಿಷವಸ್ತುಗಳುಳ್ಳ ರಕ್ತದ್ರವವನ್ನು 500ರಿಂದ 1,000 ಘಟಕಗಳಷ್ಟು ಕೊಟ್ಟರೆ ವ್ಯಕ್ತಿಯ ದೇಹದಲ್ಲಿ ಹಂಗಾಮಿಯಾಗಿ ನಿರೋಧಶಕ್ತಿ ಬರುತ್ತದೆ. ಈ ಶಕ್ತಿ 2-3 ವಾರಗಳಲ್ಲಿ ಅದೃಶ್ಯವಾಗುತ್ತದೆ. ಪ್ರಕೃತಿದತ್ತವಾದ ಸಕ್ರಿಯ ನಿರೋಧಶಕ್ತಿ ರೋಗ ಅಥವಾ ಸೋಂಕಿನ ಸಂಪರ್ಕದಿಂದಲೂ ಉತ್ಪತ್ತಿಯಾಗುತ್ತದೆ. ವ್ಯಕ್ತಿಯಲ್ಲಿ ಈ ರೀತಿಯ ನಿರೋಧಶಕ್ತಿ ಇದೆಯೆ ಇಲ್ಲವೆ ಎಂಬುದನ್ನು ಕಂಡಹಿಡಿಯಲು ಶಿಕ್ ಪರೀಕ್ಷೆ ಮಾಡಿ ತಿಳಿದುಕೊಳ್ಳಬಹುದು.[] ಈ ಪರೀಕ್ಷೆಯಂತೆ ಕೈತೋಳಿನ ಮುಂಭಾಗದ ಚರ್ಮಕ್ಕೆ 0.2 ಮಿ.ಲಿ. ಗಳಷ್ಟು ಡಿಫ್ತೀರೀಯ ವಿಷವನ್ನು ಚುಚ್ಚುಮದ್ದಿನಂತೆ ಸೇರಿಸಿ 24-36 ಗಂಟೆಗಳ ಅನಂತರ ಪರೀಕ್ಷಿಸಿದರೆ ಕೊಟ್ಟ ಸ್ಥಳದಲ್ಲಿ ಚರ್ಮ ಊದಿ ಕೆಂಪಗಾಗಬಹುದು. ಅಂಥವರ ರಕ್ತದಲ್ಲಿ ವಿಷವನ್ನು ನಿಷ್ಪರಿಣಾಮಕಾರಿ ಮಾಡುವ ಪ್ರತಿವಿಷವಸ್ತುಗಳಿಲ್ಲದಿರುವುದೇ ಈ ಪ್ರತಿಕ್ರಿಯೆಗೆ ಕಾರಣ, ಅಂದರೆ ಈ ಪ್ರತಿಕ್ರಿಯೆ ತೋರುವವರಿಗೆ ಡಿಫ್ತೀರಿಯ ರೋಗ ಅಂಟಬಹುದು. ಪ್ರತಿಕ್ರಿಯೆ ತೋರದಿರುವವರ ದೇಹದಲ್ಲಿ ಪ್ರತಿವಿಷವಸ್ತುಗಳು ಇವೆಯಾದ್ದರಿಂದ ಅವರಿಗೆ ರೋಗ ತಗಲುವ ಸಂಭವ ಕಡಿಮೆ. ಭಾರತದಲ್ಲಿ ಈ ಪರೀಕ್ಷೆಗಳನ್ನು ಕೆಲವೆಡೆಗಳಲ್ಲಿ ಸಾಮೂಹಿಕವಾಗಿ ನಡೆಸಿ ಅಧ್ಯಯನ ಮಾಡಲಾಗಿದೆ. ಮೂರು ವರ್ಷದ ವಯಸ್ಸಿನ ಮಕ್ಕಳಲ್ಲಿ ಶೇ 70 ಮಂದಿಯಲ್ಲಿ ಹಾಗೂ ಐದು ವರ್ಷದ ವಯಸ್ಸಿನ ಮಕ್ಕಳಲ್ಲಿ ಶೇಕಡ 99 ಮಂದಿಯಲ್ಲಿ ನಿರೋಧ ಶಕ್ತಿ ಬೆಳದು ಬಂದಿರುವುದು ಈ ಅಧ್ಯಯನಗಳಿಂದ ತಿಳದಿದೆ. ಅಂದರೆ ಸಾಮೂಹಿಕ ಚುಚ್ಚುಮದ್ದಿನ (mass immunization) ಕಾರ್ಯಕ್ರಮ ಜಾರಿಗೆ ಬಂದು ಫಲದಾಯಕವಾಗಬೇಕಾದರೆ ಮಕ್ಕಳಿಗೆ ಮೂರು ವರ್ಷಗಳು ತುಂಬುವ ಮುನ್ನ ರೋಗರಕ್ಷೆ ಕೊಡಬೇಕೆಂದಾಯಿತು. ಡಿಫ್ತೀರಿಯ ಟಾಕ್ಸಾಯಿಡನ್ನು ಮಕ್ಕಳಿಗೆ ಸಕಾಲದಲ್ಲಿ ಕೊಟ್ಟು ಸಕ್ರಿಯಾನಿರೋಧ ಶಕ್ತಿಯನ್ನು ಉತ್ಪತ್ತಿ ಮಾಡಬಹುದು. ಜನಸಮೂಹದಲ್ಲಿ ಇದರ ಪಿಡುಗನ್ನು ತಡೆಹಾಕಲು ಕಡೇ ಪಕ್ಷ 100ಕ್ಕೆ 70 ಮಂದಿಯಲ್ಲಾದರೂ ಸಕ್ರಿಯಾನಿರೋಧಶಕ್ತಿ ಇರಬೇಕೆಂದು ಅಂದಾಜಾಗಿದೆ.

ಬಾಹ್ಯ ಪರಿಸರ ಮತ್ತು ಡಿಫ್ತೀರಿಯ

[ಬದಲಾಯಿಸಿ]

ಏರುಪೇರುಗಳು ಕೆಲವು ವೇಳೆ ಕಂಡು ಬರಬಹುದಾದರೂ ವರ್ಷದುದ್ದಕ್ಕೂ ಈ ರೋಗದಿಂದ ನರಳುವವರಿರುತ್ತಾರೆ. ಕಲ್ಕತ್ತ ನಗರಗಳಲ್ಲಿ ಆಗಸ್ಟ್ ತಿಂಗಳಲ್ಲಿ ರೋಗದ ಸಂಖ್ಯೆ ಅತ್ಯಧಿಕವಾದರೆ ಮುಂಬಯಿ ನಗರದಲ್ಲಿ ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಉಪದ್ರವದ ಪರಮಾವಧಿ ಕಂಡುಬಂದಿದೆ.

ರೋಗ ಬಲಿಯುವ ಕಾಲ

[ಬದಲಾಯಿಸಿ]

ರೋಗಕಾಲದ ಏಕಾಣುಜೀವಿಗಳು ಆಶ್ರಯ ಕೊಡುವ ವ್ಯಕ್ತಿಯ ದೇಹವನ್ನು ಹೊಕ್ಕ 2 ರಿಂದ 5 ದಿವಸಗಳೊಳಗೆ ರೋಗ ಲಕ್ಷಣಗಳು ಕಾಣಿಸುತ್ತವೆ.

ರೋಗ ಹರಡುವ ಬಗೆ

[ಬದಲಾಯಿಸಿ]

ಮುಖ್ಯವಾಗಿ ಮೂರು ಮಾರ್ಗಗಳಿಂದ ರೋಗ ಹರಡಲು ಅವಕಾಶವಿದೆ. ಮಾತನಾಡಿದಾಗ, ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ಹೊರಬೀಳುವ ತುಂತುರುಗಳಿಂದಲೂ, ಸೋಂಕು ಅಂಟಿರುವ ಧೂಳಿನಿಂದಲೂ ರೋಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಮಲಿನಗೊಂಡ ಬಟ್ಟೆ ಬರೆಗಳಿಂದ ರೋಗ ಹರಡಬಹುದಾದರೂ ಹಾಗಾಗುವುದು ಅಪರೂಪ. ಕುದಿಸಿ ಉಪಯೋಗಿಸುವುದರಿಂದ ಹಾಲಿನ ಮೂಲಕ ಸೋಂಕು ಹರಡುವುದು ಅಪರೂಪ.

ದೇಹದೊಳಗೆ ಸೋಂಕಿನ ಪ್ರವೇಶ

[ಬದಲಾಯಿಸಿ]

ಉಸಿರಾಡುವಾಗ ಮೂಗು, ಬಾಯಿ, ಗಂಟಲು, ಶ್ವಾಸನಾಳ ಅಂದರೆ ಶ್ವಾಸಾಂಗಗಳ ಮೂಲಕ ಸೋಂಕು ದೇಹಕ್ಕೆ ಹೊಕ್ಕು ನೆಲೆಸುತ್ತದೆ.[] ಚರ್ಮದ ಮೂಲಕ ಅಂದರೆ ಗಾಯಗಳ ಮೂಲಕವೂ ಸೋಂಕು ಅಂಟಬಹುದು.[] ಕಣ್ಣು, ಜನನೇಂದ್ರಿಯ ಹಾಗೂ ನಡು ಕಿವಿ ಲೋಳೆಪೊರೆಗಳಲ್ಲಿ ಕೆಲವು ವೇಳೆ ಸೋಂಕು ಕಂಡುಬರುವುದುಂಟು.

ರೋಗಕಾರಕ ಜೀವಾಣುಗಳು ದೇಹವನ್ನು ಹೊಕ್ಕು ಸ್ಥಾಪಿತವಾದೆಡೆಗಳಲ್ಲೇ ವೃದ್ಧಿಗೊಂಡು ಸ್ಥಳಿಕ ವಿಕಾರಗಳನ್ನು ಉಂಟುಮಾಡುತ್ತವೆ. ಗಾಯವಾಗಿ ಅದರಿಂದ ಸ್ರಾವ ಒಸರುವುದು, ರೋಗದ ಪೊರೆ ರೂಪುಗೊಳ್ಳುವುದು, ದುರ್ನಾತ, ಸುತ್ತುಮುತ್ತಲಿರುವ ಅಂಗಾಂಶಗಳ ಉರಿ, ಊತ, ದುಗ್ಧ ಗ್ರಂಥಿಗಳೂ ಉರಿ ಊತಕ್ಕೊಳಗಾಗಿ ಗಂಟಲೂದಿಕೊಂಡು ಹೋರಿಗಂಟಲಿನಂತೆ ಕಾಣುವುದು-ಇವು ಮುಖ್ಯವಾದ ಕೆಲವು ವಿಕಾರಗಳು. ಜೀವಾಣುಗಳು ಸ್ಥಾಪನೆಯಾದೆಡೆಗಳಲ್ಲಿ ಅತ್ಯುಗ್ರವಾದ ಹೊರಜೀವವಿಷವನ್ನು ಉತ್ಪತ್ತಿ ಮಾಡುತ್ತವೆ.

ರೋಗಿಯ ಮರಣಕ್ಕೆ ಕಾರಣಗಳು

[ಬದಲಾಯಿಸಿ]

ಹೃದಯಸ್ನಾಯುವಿನ ಮೇಲೆ ಹೊರಜೀವವಿಷದ ಪರಿಣಾಮದಿಂದ ರೋಗ ಪ್ರಾರಂಭದ ಮೂರು ದಿನಗಳಲ್ಲಿ ಅಥವಾ ಎರಡು ವಾರಗಳ ಅನಂತರ ಸಾವಕಾಶವಾಗಿ ಹೃದಯಾಘಾತಕ್ಕೊಳಗಾಗಿ ರೋಗಿ ಅಸುನೀಗುವುದು ಸಾಮಾನ್ಯ. ಹೊರಜೀವವಿಷದ ವ್ಯಾಪನೆಯಿಂದ ಇತರ ಸ್ನಾಯುಗಳೂ ಅಧೀನ ತಪ್ಪಿ ಸಾವಿಗೆಡೆಗೊಡಬಹುದು. ಮುಖ್ಯವಾಗಿ ವಪೆ ಮತ್ತಿತರ ಶ್ವಾಸಾಂಗಗಳ ಸ್ನಾಯುಗಳು ಈ ರೀತಿಯ ಪ್ರಭಾವಕ್ಕೊಳಗಾಗಿ ಸಾವನ್ನು ಉಂಟುಮಾಡಬಹುದು. ಗಂಟಲಿನ ಅಂಗಾಂಶಗಳು ಉರಿ, ಊತಕ್ಕೊಳಗಾಗಿ ಉಸಿರಾಡುವುದಕ್ಕಾಗದಾಗಲೂ ಸಾವು ಬಂದಡಸಬಹುದು.

ರೋಗ ನಿದಾನ

[ಬದಲಾಯಿಸಿ]

ಮೊದಮೊದಲಲ್ಲಿ ಈ ರೋಗವನ್ನು ಗೊತ್ತು ಹಚ್ಚುವುದು ಸುಲಭವಲ್ಲ. ಸ್ವಲ್ಪ ಅನುಮಾನ ಬಂದರೂ ಕೂಡಲೇ ಡಿಫ್ತೀರಿಯ ರೋಗ ಚಿಕಿತ್ಸೆಯನ್ನೇ ತಕ್ಷಣ ಪ್ರಾರಂಭಿಸಬೇಕು. ಗಂಟಲು ಮೂಗಿನ ಲೋಳೆಪೊರೆಯಿಂದ, ಸ್ರವಿಸುವ ಗಾಯದಿಂದ ಇಲ್ಲವೆ ಡಿಫ್ತೀರಿಯ ಪೊರೆಯಿಂದ ಪರೀಕ್ಷೆಗಾಗಿ ವಸ್ತುವನ್ನು ಪಡೆದು ಪ್ರಯೋಗಶಾಲೆಗಳಲ್ಲಿ ಸೂಕ್ತ ಪರೀಕ್ಷೆಗಳನ್ನು ನಡೆಸಿ ರೋಗ ನಿರ್ಧರಿಸಬಹುದು. ದ್ರವಮಾಧ್ಯಮಗಳಲ್ಲಿ ತಳಿ ಎಬ್ಬಿಸಿ, ಸೂಕ್ಷ್ಮದರ್ಶಿಗಳಲ್ಲಿ ಪರಿಶೀಲಿಸಿ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಅಷ್ಟಾಗುವವರೆಗೂ ಚಿಕಿತ್ಸೆಯನ್ನು ಮಾತ್ರ ತಡೆಹಿಡಿಯಬಾರದು.

ರೋಗ ಪ್ರತಿಬಂಧಕೋಪಾಯಗಳು

[ಬದಲಾಯಿಸಿ]

ವ್ಯಕ್ತಿಯಲ್ಲಿ ಸಕ್ರಿಯ ಹಾಗೂ ಅಕ್ರಿಯ ನಿರೋಧ ಶಕ್ತಿಯನ್ನು ಉತ್ಪತ್ತಿಮಾಡಿ ರೋಗವಿರುದ್ಧ ರಕ್ಷಣೆ-ಕೊಡುವುದೊಳಿತು. ಸಕ್ರಿಯ ನಿರೋಧ ಶಕ್ತಿಯನ್ನು ಸಾಮೂಹಿಕವಾಗಿ ಉತ್ಪನ್ನ ಮಾಡಿ ರೋಗ ತಡೆಗಟ್ಟುವುದು ಆಧುನಿಕ ಕ್ರಮ. ಈ ಸಕ್ರಿಯ ನಿರೋಧಶಕ್ತಿಯನ್ನು ಉತ್ಪತ್ತಿಮಾಡಲು ಸಿದ್ಧಮಾಡಿದ ಪ್ರತಿವಿಷಜನಕಗಳು ಹೀಗಿವೆ:

  1. ಪಟಿಕದ ಟಾಕ್ಸಾಯಿಡ್,
  2. ಅಲ್ಯೂಮಿನಿಯಂ ಫಾಸ್‍ಫೇಟ್ ಟಾಕ್ಸಾಯಿಡ್,
  3. ಫಾರ್ಮಾಲ್ ಟಾಕ್ಸಾಯಿಡ್,
  4. ಟಾಕ್ಸಾಯಿಡ್-ಆಂಟಿ-ಟಾಕ್ಸಿನ್ ಫ್ಲಾಕ್ಯೂಲ್,
  5. ಟ್ರಿಪಲ್ ಆಂಟಿಜೆನ್ (ತ್ರಿರೋಗ ನಿರೋಧಕರಕ್ಷೆ).

ಪ್ರಪ್ರಥಮದಲ್ಲಿ ಪೂರ್ಣನಿರೋಧಶಕ್ತಿ ಬೆಳೆಸಲು ಕೊಡಬೇಕಾದ ಚುಚ್ಚುಮದ್ದುಗಳ ಪ್ರಮಾಣ

ಟಾಕ್ಸಾಯಿಡ್ ಬಗೆ ಮೊದಲನೆ ಬಾರಿ ಎರಡನೆ ಬಾರಿ ಕಡೆಯದು ನಿರೋಧಶಕ್ತಿ ವೃದ್ಧಿಗೊಳಿಸಲು 4-5 ವರ್ಷಗಳಿಗೊಮ್ಮೆ ಒಂದು ಬಾರಿ ಕೊಡಬೇಕಾದ ಪ್ರಮಾಣ
1 ಪಟಿಕದ ಟಾಕ್ಸಾಯ್ಡ್ ಅಥವಾ ಅಲ್ಯುಮಿನಿಯಂ ಫಾಸ್‍ಫೇಟ್ ಟಾಕ್ಸಾಯ್ಡ್ 0.5 ಮಿ.ಲೀ. 0.5 ಮಿ.ಲೀ. --------- 0.2 ರಿಂದ 0.5 ಮಿ.ಲೀ.
2ಫಾರ್ಮಾಲ್ ಟಾಕ್ಸಾಯಿಡ್ 1.0 ಮಿ.ಲೀ. 1.0 ಮಿ.ಲೀ. ------ 0.2 ರಿಂದ 0.5 ಮಿ.ಲೀ.
3ಟಾಕ್ಸಾಯಿಡ್-ಆಂಟಿ-ಟಾಕ್ಸಿನ್ ಫ್ಲಾಕ್ಯೂಲ್ಸ್ 1.0 ಮಿ.ಲೀ. 1.0 ಮಿ.ಲೀ. 1.0 ಮಿ.ಲೀ. 1.0 ಮಿ.ಲೀ.
4 ತ್ರಿರೋಗ ಚುಚ್ಚುಮದ್ದು ಸರಳವಾದದ್ದು ಡಿ.ಪಿ.ಟಿ. 1.0 ಮಿ.ಲೀ. 1.0 ಮಿ.ಲೀ. 1.0 ಮಿ.ಲೀ. 1.0 ಮಿ.ಲೀ. 18 ತಿಂಗಳುಗಳ ಅನಂತರ ಹಾಗೂ ಶಾಲೆಗೆ ಸೇರುವ ವೇಳೆಯಲ್ಲಿ
5 ಪಟಿಕ ಹೀರಿದ ತ್ರಿರೋಗ ಚುಚ್ಚುಮದ್ದು 0.5 ಮಿ.ಲೀ. 0.5 ಮಿ.ಲೀ. ------- 0.5ಮಿ.ಲೀ.ಶಾಲೆಗೆ ಸೇರುವಾಗ

(1, 2, 3, 4 ಚುಚ್ಚುಮದ್ದುಗಳ ಮಧ್ಯಂತರ 4 ರಿಂದ 6 ವಾರಗಳು, 5ನೇ ವಿಧದ ಚುಚ್ಚುಮದ್ದುಗಳ ಮಧ್ಯಂತರ ಕಡೇಪಕ್ಷ 2 ತಿಂಗಳುಗಳಾದರೂ ಇರಬೇಕು.)

ಮೇಲೆ ಹೇಳಿರುವ ಪ್ರತಿವಿಷಜನಕಗಳಲ್ಲಿ ಫಾರ್ಮಾಲ್ ಟಾಕ್ಸಾಯಿಡ್ ಹಾಗೂ ಟಾಕ್ಸಾಯಿಡ್ ಆಂಟಿ-ಟಾಕ್ಸಿನ್ ಫ್ಲಾಕ್ಯೂಲುಗಳನ್ನು ಪ್ರಪ್ರಥಮದಲ್ಲೇ ಉಪಯೋಗಿಸಲು ತಜ್ಞರು ಶಿಫಾರಸು ಮಾಡುವುದಿಲ್ಲ. ಇವುಗಳಿಗೆ ಪ್ರತಿವಿಷವಸ್ತುವನ್ನು ಯಶಸ್ವಿಯಾಗಿ ಉತ್ಪತ್ತಿ ಮಾಡುವ ಶಕ್ತಿ ಸಾಲದು. ಸಾಮಾನ್ಯ ಬಳಕೆಗೆ ಅತ್ಯತ್ತಮವಾದದ್ದು ತ್ರಿರೋಗ ನಿರೋಧ ರಕ್ಷೆ.

ಈ ತ್ರಿರೋಗ ನಿರೋಧರಕ್ಷೆ ಒಂದೇ ಕಾಲದಲ್ಲಿ ಡಿಫ್ತೀರಿಯ, ನಾಯಿಕೆಮ್ಮು ಮತ್ತು ಧನುರ್ವಾಯು ಈ ಮೂರು ರೋಗಗಳಿಗೆ ತಡೆಯನ್ನೊದಗಿಸುತ್ತವೆ.[೧೦] ಸರಳವಾದ ಟಾಕ್ಸಾಯಿಡ್ ಹಾಗೂ ಪಟಿಕ ಮಾಡಿದ ಟಾಕ್ಸಾಯಿಡ್ ಎಂದು ಈ ಮದ್ದಿನಲ್ಲಿ ಎರಡು ಬಗೆ. ದೇಹದಲ್ಲಿ ಪೂರ್ಣನಿರೋಧ ಶಕ್ತಿಯುತ್ಪತ್ತಿ ಮಾಡಲು ಸರಳವಾದ ಟಾಕ್ಸಾಯಿಡನ್ನು ಮೇಲ್ತೋಳಿನ ಮಾಂಸಖಂಡಕ್ಕೆ ತಿಂಗಳಿಗೊಮ್ಮೆ 1 ಮಿಲಿಲೀಟರಿನಷ್ಟು ಪರಿಮಾಣದಲ್ಲಿ ಮೂರು ಬಾರಿ ಕೊಡಬೇಕು. ಇದರಿಂದ ಬೆಳೆದ ನಿರೋಧ ಶಕ್ತಿಯನ್ನು ವೃದ್ಧಿಗೊಳಿಸಲು 18 ತಿಂಗಳುಗಳ ಅನಂತರ ಹಾಗೂ ಶಾಲೆಗೆ ಸೇರಿಸುವ ವೇಳೆಯಲ್ಲಿ ಒಂದೊಂದು ಬಾರಿ ಕೊಡಬೇಕು. ಪ್ರತಿವಿಷವಸ್ತುವನ್ನು ಉತ್ಪತ್ತಿಮಾಡುವ ಕ್ರಿಯೆಯಲ್ಲಿ ಪಟಿಕ ಕೂಡಿದ ಟಾಕ್ಸಾಯಿಡ್ ಸರಳವಾದದ್ದಕ್ಕಿಂತ ಐದರಷ್ಟು ಅಧಿಕ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪ್ರಥಮವಾಗಿ ಪೂರ್ಣ ನಿರೋಧಶಕ್ತಿ ಬೆಳೆಸಲು ಎರಡೇ ಬಾರಿ ಕೊಟ್ಟರೆ ಸಾಕು. ಒಂದರಿಂದ ಮತ್ತೊಂದರ ನಡುವಣ ಅವಧಿ ಕಡೇ ಪಕ್ಷ ಎರಡು ತಿಂಗಳುಗಳಾದರೂ ಇರಬೇಕು.

ಯಾವ ಯಾವ ನಿರೋಧ ಯಾವ ಯಾವ ಪ್ರಮಾಣದಲ್ಲಿ ಕೊಡಬೇಕು, ಎಷ್ಟು ಬಾರಿ ಕೊಡಬೇಕು, ಅವುಗಳ ಮಧ್ಯವಿರಬೇಕಾದ ಅವಧಿ ಎಷ್ಟು ಹಾಗೂ ನಿರೋಧ ಶಕ್ತಿ ವೃದ್ಧಿಗೊಳಿಸಬೇಕಾದದ್ದು ಎಷ್ಟು ವರ್ಷಕ್ಕೊಮ್ಮೆ ಇತ್ಯಾದಿ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.

ರೋಗ ನಿಯಂತ್ರಣ

[ಬದಲಾಯಿಸಿ]

ರೋಗ ಸೋಂಕಿನಿಂದ ಸಾರ್ವಜನಿಕರಲ್ಲಿ ಹರಡದಂತೆ ನೋಡಿಕೊಳ್ಳುವುದು ಮೊದಲ ಕೆಲಸ.

ಎಳಸಿನಲ್ಲೇ ರೋಗವನ್ನು ಗುರುತು ಹಚ್ಚುವುದು ನಿಯಂತ್ರಣದ ಮೊದಲ ಹೆಜ್ಜೆ. ಗಂಟಲು ಮತ್ತು ಮೂಗಿನ ಗಾಯದ ಸ್ರಾವವನ್ನು ಪರೀಕ್ಷೆಗೊಳಪಡಿಸಿ ಡಿಫ್ತೀರಿಯ ಜೀವಾಣುಗಳಿವೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಬೇಕು. ಜೀವಾಣುಗಳು ವಿಷಪೂರಿತ ಗುಂಪಿಗೆ ಸೇರಿದವುಗಳೇ ಅಥವಾ ವಿಷರಹಿತ ಗುಂಪಿಗೆ ಸೇರಿದವುಗಳೇ ಎಂಬುದೂ ಇತ್ಯರ್ಥವಾಗಬೇಕು. ಪರೀಕ್ಷೆಯಲ್ಲಿ ಡಿಫ್ತೀರಿಯ ಜೀವಾಣುಗಳಿಲ್ಲವೆಂದು ವರದಿಯಾದರೂ ಚಿಕಿತ್ಸೆಯನ್ನು ನಿಲ್ಲಿಸಲಾಗದು.

ರೋಗಿಯನ್ನು ಪ್ರತ್ಯೇಕಿಸಿ ಇತರರ ಸಂಪರ್ಕವಿಲ್ಲದಂತೆ ಮಾಡಬೇಕು. ರೋಗಿಯ ಸಂಪರ್ಕ ಹೊಂದಿದವರೆಲ್ಲರೂ 4 ವಾರಗಳು ಬೇರೆಯಿದ್ದು ದಿನವಹಿ ವೈದ್ಯರ ಮೇಲ್ವಿಚಾರಣೆ ಒಳಪಟ್ಟಿರಬೇಕು. ನಾಲ್ಕು ವಾರಗಳ ಅನಂತರದ ಪರೀಕ್ಷೆಯಲ್ಲಿ ಸೋಂಕು ಇಲ್ಲವೆಂದು ಖಚಿತವಾದಲ್ಲಿ ಪುನಃ ಅವರು ಇತರರೊಂದಿಗೆ ಬೆರೆಯಲು ಅವಕಾಶ ಕೊಡಲಡ್ಡಿಯಿಲ್ಲ.

ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ಮತ್ತು ಶುಶ್ರೂಷೆ ಅಗತ್ಯ. ರೋಗಿಯ ದೇಹದಲ್ಲಿ ವ್ಯಾಪಿಸಿರುವ ಹೊರಜೀವವಿಷವನ್ನು ನಿಷ್ಪರಿಣಾಮಕಾರಿಯಾಗಿ ಮಾಡಲು 40,000 ದಿಂದ 100,000 ಘಟಕಗಳ ಪ್ರಮಾಣದಲ್ಲಿ ಸಿದ್ಧಪಡಿಸಿದ ಪ್ರತಿವಿಷವಸ್ತುಗಳನ್ನೊಳಗೊಂಡ ರಕ್ತದ್ರವವನ್ನು ಕೊಡಬೇಕು. ಈ ರಕ್ತದ್ರವ ರೋಗಿಗೆ ಒಗ್ಗುತ್ತದೆಯೇ ಇಲ್ಲವೆ ಎಂಬುದು ಸೂಕ್ತ ಪರೀಕ್ಷೆಯಿಂದ ನಿರ್ಧಾರವಾದ ಅನಂತರವೇ ಕೊಡಬೇಕು. ಇಲ್ಲದಿದ್ದರೆ ರೋಗಿಯ ಪ್ರಾಣಕ್ಕೆ ಅಪಾಯ. ಜೊತೆಗೆ ಪೆನಿಸಿಲಿನ್ ಪ್ರತಿಜೀವಕವನ್ನು ಭಾರಿ ಪ್ರಮಾಣದಲ್ಲಿ ಅಂದರೆ 5 ಘಟಕಗಳನ್ನು ದಿನಕ್ಕೆ ಎರಡು ಬಾರಿಯಂತೆ ಒಂದು ವಾರ ಕೊಡಬೇಕು.

ರೋಗಿಯಿಂದ ಹೊರಬೀಳುವ ರೋಗಕಾರಕಗಳನ್ನು ನಾಶಪಡಿಸಲು ಕ್ರಿಮಿನಾಶಕಗಳನ್ನು ಉಪಯೋಗಿಸಬೇಕು. ಗಂಟಲು, ಮೂಗುಗಳ ವಿಸರ್ಜನೆ ಮತ್ತು ಲಸಿಕೆಯಿಂದ ಮಲಿನವಾದ ವಸ್ತುಗಳನ್ನೂ ಸೂಕ್ತ ರೀತಿಯಲ್ಲಿ ಶುದ್ಧಗೊಳಿಸಬೇಕು. ರೋಗವಿಮೋಚನೆಯಾದ ಮೇಲೂ ಈ ಕ್ರಮಗಳನ್ನು ಮುಂದುವರೆಸಿ ರೋಗಿಯ ಕೊಠಡಿಯನ್ನೂ ಶುದ್ಧಗೊಳಿಸುವುದು ಒಳ್ಳೆಯದು.

ರೋಗಿ ಚೇತರಿಸಿಕೊಂಡ ಮೇಲೆ ಸೋಂಕು ನಿರ್ನಾಮವಾಗಿದೆಯೇ ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಸೊಂಕಿದ್ದವರಿಗೆ ಪ್ರತಿಜೀವಕಗಳಿಂದ ಚಿಕಿತ್ಸೆ ಕೊಡಬೇಕು. ಇದಕ್ಕಾಗಿ 250 ಮಿಲಿಗ್ರಾಂ ಎರಿತ್ರೋಮೈಸಿನನ್ನು 6 ಗಂಟೆಗೊಂದಾವರ್ತಿಯಂತೆ ಕೊಡಬೇಕು.

ರೋಗಿಯ ಸಂಪರ್ಕ ಹೊಂದಿದವರನ್ನು ಪರೀಕ್ಷೆಗೆ ಒಳಪಡಿಸುವುದೊಂದೇ ಅಲ್ಲದೆ ಕೂಡಲೆ ಸಿದ್ಧಪಡಿಸಿದ ಪ್ರತಿವಿಷವಸ್ತುವಿನ ರಕ್ತದ್ರವವನ್ನು 500-1000 ಘಟಕಗಳ ಪ್ರಮಾಣದಲ್ಲಿ ಕೊಡಬೇಕು. ಇದರೊಂದಿಗೆ ಎರಡು ವಾರಗಳ ಮೇಲೆ ಪ್ರತಿಯೊಬ್ಬರಿಗೂ ಸಕ್ರಿಯ ನಿರೋಧ ಶಕ್ತಿ ಬೆಳೆಸಲು ಟಾಕ್ಸಾಯಿಡುಗಳನ್ನು ಕೊಡಬೇಕು. ಮೊದಲೇ ಟಾಕ್ಸಾಯಿಡ್ ಪಡೆದು ಸಕ್ರಿಯ ನಿರೋಧ ಶಕ್ತಿಯುಳ್ಳವರಿಗೆ ಈ ಶಕ್ತಿಯನ್ನು ವೃದ್ಧಿಗೊಳಿಸಲು 0.1 ಅಥವಾ 0.2 ಮಿ.ಲಿ. ಟಾಕ್ಸಾಯಿಡ್ ಚುಚ್ಚುಮದ್ದನ್ನು ಕೊಡಬೇಕು. ಸಂಪರ್ಕ ಹೊಂದಿದವರೆಲ್ಲರೂ ದಿನವಹಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯ. ಮಕ್ಕಳ ಸಂಪರ್ಕವಿರುವವರು ಅಂದರೆ ದಾದಿಯರು, ಉಪಾಧ್ಯಾಯರು ಇತ್ಯಾದಿ ಉದ್ಯೋಗದವರು ತಮ್ಮಲ್ಲಿ ರೋಗದ ಸೊಂಕಿಲ್ಲವೆಂದು ನಿರ್ಧಾರವಾಗುವ ವರೆಗೆ ಉದ್ಯೋಗದಲ್ಲಿ ತೊಡಗಬಾರದು.

ಗಂಟಲ ಮಾರಿ ರೋಗದ ಮೂಲೋತ್ಪಾಟನೆಗೆ ಆಧುನಿಕ ವೈದ್ಯವಿಜ್ಞಾನದ ಜೊತೆಗೆ ಜನಸಮುದಾಯ ಶಿಕ್ಷಣ ಮತ್ತು ಸಹಕಾರವೂ ಅಗತ್ಯವೆಂಬ ವಿಷಯವನ್ನು ಒತ್ತಿಹೇಳಬೇಕಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Atkinson, William (May 2012). Diphtheria Epidemiology and Prevention of Vaccine-Preventable Diseases (12 ed.). Public Health Foundation. pp. 215–230. ISBN 9780983263135. Archived from the original on 15 September 2016.
  2. Ryan, Kenneth J.; Ray, C. George, eds. (2010). Sherris medical microbiology (5th ed.). New York: McGraw Hill Medical. ISBN 978-0-07-160402-4.
  3. Klebs, E. (1883) "III. Sitzung: Ueber Diphtherie" (Third session: On diphtheria), Verhandlungen des Congresses für innere Medicin. Zweiter Congress gehalten zu Wiesbaden, 18.-23. April 1883 Archived 22 May 2016 ವೇಬ್ಯಾಕ್ ಮೆಷಿನ್ ನಲ್ಲಿ. (Proceedings of the Congress on Internal Medicine. Second congress held at Wiesbaden, 18–23 April 1883), 2 : 139–154.
  4. Payne, J. W.; Rose, Anthony H.; Tempest, D. W. (27 September 1974). "Peptides and micro-organisms". Advances in Microbial Physiology, Volume 13. Vol. 13. Oxford, England: Elsevier Science. pp. 55–160. doi:10.1016/S0065-2911(08)60038-7. ISBN 978-0-08-057971-9. OCLC 1049559483. PMID 775944.
  5. Kowalski, Wladyslaw (2012). Hospital airborne infection control. Boca Raton, Florida: CRC Press. p. 54. ISBN 9781439821961. Archived from the original on 21 December 2016.
  6. "Diphtheria vaccine" (PDF). Wkly Epidemiol Rec. 81 (3): 24–32. 20 January 2006. PMID 16671240. Archived (PDF) from the original on 6 June 2015.
  7. Barile MF, Kolb RW, Pittman M (September 1971). "United States standard diphtheria toxin for the Schick text and the erythema potency assay for the Schick text dose". Infect. Immun. 4 (3): 295–306. doi:10.1128/IAI.4.3.295-306.1971. PMC 416303. PMID 4949493.
  8. Diphtheria Causes and Transmission Archived 13 April 2014 ವೇಬ್ಯಾಕ್ ಮೆಷಿನ್ ನಲ್ಲಿ.. U.S. Center for Disease Control and Prevention (2016).
  9. Youwang Y.; Jianming D.; Yong X.; Pong Z. (1992). "Epidemiological features of an outbreak of diphtheria and its control with diphtheria toxoid immunization". International Journal of Epidemiology. 21 (4): 807–11. doi:10.1093/ije/21.4.807. PMID 1521987.
  10. "DTaP (Diphtheria, Tetanus, Pertussis) Vaccine Information Statement". U.S. Centers for Disease Control and Prevention (CDC). 1 April 2020. Archived from the original on 28 December 2019. Retrieved 27 July 2020. Public Domain This article incorporates text from this source, which is in the public domain.


ಹೆಚ್ಚಿನ ಓದಿಗೆ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  翻译: